ನೂತನ ದಂಪತಿಗಳು ಪ್ರಥಮರಾತ್ರಿ ನಡೆಸುವ ಸಮಾಗಮವನ್ನು "ನಿಷೇಕ" ಎನ್ನುತ್ತಾರೆ. ವಿವಾಹವಾದ ನಂತರ ಪತ್ನಿಯು ರಜಸ್ವಲೆಯಾಗಿ ಶುದ್ಧಿಗೊಂಡಾಗ ಪರ್ವದಿನ ದುಷ್ಟನಕ್ಷತ್ರ- ತಿಥಿಗಳನ್ನು ಹೊರತುಪಡಿಸಿ, ಶುಭ ತಾರಾನುಕೂಲ - ಲಗ್ನಶುದ್ಧ ದಿನ ಋತುದಾನ ನಡೆಸಿದರೆ ಸತ್ಸಂತತಿ ಫಲಪ್ರಾಪ್ತಿಯಾಗುವುದು. ಮೊದಲ ೧೬ ದಿನಗಳನ್ನು ಮಾತ್ರ "ಋತುಕಾಲ" ಎನ್ನುತ್ತಾರೆ. ಮೊದಲ ೪ ದಿನಗಳನ್ನು ಬಿಟ್ಟು ಶುದ್ಧವಾದ ನಂತರದ ೧೨ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಒಳ್ಳೆಯ ದಿನದಂದು ನಡೆಸಬೇಕು. ಗರ್ಭಾಧಾನ ಸಂಸ್ಕಾರದ ಮಂತ್ರ, ಹೋಮ-ವಿಧಾನಗಳಿಂದ ಸ್ತ್ರೀ ಶುಚಿಯಾಗುತ್ತಾಳೆ ಹಾಗೂ ಬೀಜಕ್ಷೇತ್ರ ಸಂಬಂಧಿ ದೋಷಗಳಿಂದ ಮುಕ್ತಳಾಗುತ್ತಾಳೆ. ಈ ಸಂಸ್ಕಾರ ನಡೆಸದೇ ಇದ್ದಲ್ಲಿ ಗರ್ಭಸ್ಥ ಶಿಶುವು ದೋಷಮುಕ್ತವಾಗಲಾರದು ಎಂದು ಶಾಸ್ತ್ರಗಳ ಅಭಿಪ್ರಾಯ.
ದಂಪತಿಗಳು ಅಭ್ಯಂಗಸ್ನಾನ ಮಾಡಿ ಹೊಸವಸ್ತ್ರಗಳನ್ನು ಧರಿಸಿ, ಕುಲದೇವತೆನ್ನೂ ಇಷ್ಟದೇವತೆಯನ್ನೂ ನಮಸ್ಕರಿಸಿ, ಗುರುಹಿರಿಯರ ಆಶೀರ್ವಾದವನ್ನು ಪಡೆದು, ಬ್ರಾಹ್ಮಣರು ಮತ್ತು ಕುಲಪುರೋಹಿತರ ಸಹಾಯದಿಂದ ಕರ್ಮಾ ಪ್ರಾರಂಭಿಸಬೇಕು. ಪತ್ನಿಯನ್ನು ದಕ್ಷಿಣಭಾಗದಲ್ಲಿ ಕುಳ್ಳಿರಿಸಿ ಪುಣ್ಯಾಹವಾಚನ, ನಾಂದಿಶ್ರಾದ್ಧಾದಿಗಳನ್ನು ಮುಗಿಸಿ ಸಂಕಲ್ಪವನ್ನು ಮಾಡಬೇಕು. ಪತಿ ತನ್ನ ಕೈಯಾರೆ ಹೋಮವನ್ನು ಮಾಡುವುದು ಉತ್ತಮ. ಅನಿವಾರ್ಯ ಕಾರಣಗಳಿಂದಾಗಿ, ಅಶಕ್ತನಾಗಿರುವುದರಿಂದ ಮಾಡಲು ಅಸಾಧ್ಯವಾದರೆ, ಕುಲಪುರೋಹಿತರಿಂದ ಮಾಡಿಸುವುದು ಉತ್ತಮ.
ಮದುವೆಯ ನಂತರ ನಿತ್ಯೋಪಾಸನೆ ಮಾಡದಿದ್ದಲ್ಲಿ ಪುನಃಸಂಧಾನ ಪೂರ್ವಕ ಗರ್ಭಾಧಾನವನ್ನು ನಡೆಸಬೇಕು. "ಮರುತ್"ಎಂಬ ಅಗ್ನಿಯನ್ನು ಪ್ರತಿಷ್ಠಾಪಿಸಿ, ಅನ್ವಾಧಾನ ಮಾಡುವುದು. ಪ್ರಜಾಪತಿಗೆ ಚರುವಿನ ಒಂದು ಆಹುತಿ, ವಿಷ್ಣುವಿಗೆ ಆರು, ಪುನಃ ಪ್ರಜಾಪತಿಗೆ ಒಂದು - ಹೀಗೆ ಏಳು ಅಜ್ಯಾಆಹುತಿಗಳೂ, ಮಧ್ಯೆ ಗ್ರಹ್ಯೋಕ್ತ ವಿಧಾನಗಳಿಂದೊಡಗೂಡಿದಂತೆ ಸ್ಥಾಲಿಪಾಕ ವಿಧಿಯಲ್ಲಿ ಕ್ರಮ ಮುಂದುವರಿಸಿ, ಅದೇ ಅಗ್ನಿಯಲ್ಲಿ ಚರುವನ್ನು ಬೇಯಿಸಿ, ಅವಧಾನ ಧರ್ಮದಿಂದ ಪ್ರಜಾಪತಿಗೆ ನಾಮಮಂತ್ರದಿಂದ ಹೋಮಿಸಿ, ವಿಷ್ಣುವಿಗೂ ಪ್ರಜಾಪತಿಗೂ ಅಜ್ಯಾಹುತಿಯನ್ನು ಆಯಾ ಮಂತ್ರಗಳಿಂದ ಕೊಡಬೇಕು. ನಂತರ ಪಾಪಪರಿಹಾರಕವಾದ ಎಂಟು ಮಂತ್ರಗಳಿಂದ ಪತ್ನಿಯ ತಲೆಯನ್ನು ಪೂರ್ವಕ್ಕೆ ಬೆರಳತುದಿಗಳಿರುವಂತೆ ಸ್ಪರ್ಶಿಸಬೇಕು. ಕೈತೊಳೆದು ಒಂದು ಮಂತ್ರದಿಂದ ಔಷಧಿದೇವತೆಯನ್ನು ಜಪಿಸಿ, ಎಂಟು ಮಂತ್ರಗಳಿಂದ ಅಗ್ನಿಯನ್ನೂ, ಐದು ಮಂತ್ರಗಳಿಂದ ಸೂರ್ಯನನ್ನೂ ಉಪಸ್ಥಾನ ಮಾಡುವುದು.
ಅನಂತರ ಅಶ್ವಗಂಧದ ಬದಲಿಗೆ, ದೂರ್ವಾಂಕುರದ ರಸವನ್ನು ವಸ್ತ್ರದಲ್ಲಿ ಹಿಂಡುತ್ತಾ ಪತ್ನಿಯ ಬಲಮೂಗಿನಲ್ಲಿ ಸಮಂತ್ರಕವಾಗಿ ಸುರಿಯಬೇಕು. ಆಕೆಯು ಶ್ವಾಸ ಎಳೆದುಕೊಳ್ಳುವುದರಿಂದ ಅದು ಉದರಕ್ಕೆ ಹೋಗಿ ಸೇರುವುದು. ಅನಂತರ ಆಮಂತ್ರಕವಾಗಿ, ಅಂದರೆ ಮಂತ್ರವಿಲ್ಲದೆ ಆಚಮನ ಮಾಡಿಸಿ ಸ್ವಿಷ್ಟಕೃದಾದಿ ಹೋಮಶೇಷವನ್ನು ಪೂರೈಸಬೇಕು. ಆಮೇಲೆ ಕಲಶಗ್ರಹಣ ಕಾರ್ಯವನ್ನು ಮಾಡಬೇಕು. ಎರಡು ಕಲಶಗಳನ್ನು ಸ್ಥಾಪಿಸಿ ವರುಣ- ಸವಿತೃದೇವತೆಗಳನ್ನು ಆಹ್ವಾನಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. ಪತ್ನಿಯು ಪತಿಗೆ ಅಭಿಮುಖವಾಗಿ ಪೂರ್ವದಿಕ್ಕಿನಲ್ಲಿ ಕುಳಿತಿಕೊಳ್ಳಬೇಕು. ಇಬ್ಬರೂ ಎಡಕೈಯಲ್ಲಿ ಐದು ತಾಂಬೂಲ, ಒಂದು ಅಡಿಕೆ ಹಿಡಿದು, ಬಲಕೈಯಲ್ಲಿ ಅಕ್ಷತೆಗಳಿಂದ ಪ್ರಜಾಪತಿಗೆ ಐದು ಮಂತ್ರಗಳಿಂದ ಪೂಜಿಸಬೇಕು.
ಮೊದಲು ಪತಿಯು ಉತ್ತರ ಕಲಶವನ್ನು ಎತ್ತಿ ಪತ್ನಿಯ ಕೈಗೆ ಕೊಟ್ಟು ನಂತರ ಜೊತೆಯಾಗಿ ಅದರ ಯಥಾಸ್ಥಾನದಲ್ಲಿಟ್ಟು ಪೂಜಿಸಬೇಕು. ಹೀಗೆಯೇ ಮೂರು ಸಲ ಮಾಡಬೇಕು. ಆದರೆ ಮೂರನೆಯ ಸಾಲಕ್ಕೆ ಅವಳು ಕಲಶವನ್ನು ಹಿಡಿದುಕೊಂಡು ನಿಂತುಕೊಂಡು ಒಂದು ಪ್ರದಕ್ಷಿಣೆ ಮಾಡಿ ಕಲಶತೀರ್ಥವನ್ನು ಪತಿಗೆ ಪ್ರೋಕ್ಷಿಸಿ ತಾನೂ ಪ್ರೋಕ್ಷಿಸಿಕೊಳ್ಳಬೇಕು.
ನಂತರ ಇಬ್ಬರೂ ಕಲಶವನ್ನು ಯಥಾಸ್ಥಾನದಲ್ಲಿಟ್ಟು ಪತ್ನಿಯು ಗೆರಸೆಯಲ್ಲಿ ಅಕ್ಕಿಯನ್ನು ಹಾಕಿ ನಾಲ್ಕು ದಿಕ್ಕುಗಳಿಗೂ ಮುಖಮಾಡಿ ಗೇರಬೇಕು. ತಮ್ಮ ಕೈಯಲ್ಲಿರುವ ತಾಂಬೂಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಪತ್ನಿಯು ಪತಿಗೆ ನಮಸ್ಕರಿಸಿ ದಕ್ಷಿಣದಲ್ಲಿ ಪೂರ್ವದಂತೆ ಕುಳಿತುಕೊಳ್ಳಬೇಕು. ಉತ್ತರ ಪೂಜಾಪೂರ್ವಕ ಕಳಶದೇವತೆಗಳನ್ನು ಉದ್ವಾಸನೆ ಮಾಡಿ ಬ್ರಾಹ್ಮಣರನ್ನು ತಾಂಬೂಲ- ಫಲ- ಭೋಜನ ದಕ್ಷಿಣಾದಿಗಳಿಂದ ಸಂತೋಷಪಡಿಸಿ ಆಶೀರ್ವಾದ ಪಡೆದುಕೊಳ್ಳಬೇಕು.
ರಾತ್ರಿ ಆಹಾರವು ಜೀರ್ಣವಾದ ನಂತರ ಎರಡನೇ ಯಾಮದಲ್ಲಿ ದಂಪತಿಗಳು ಸಂತೋಷಚಿತ್ತರಾಗಿ, ಮಧ್ಯಾಹ್ನ ಆರಾಧಿಸಿದ ದೇವತೆಗಳನ್ನು ಸ್ಮರಿಸಿಕೊಂಡು ಸಮಾಗಮ ನಡೆಸಬೇಕು.
ಪರಾಶರ ಸಂಹಿತೆಯಾ ಪ್ರಕಾರ ಪತ್ನಿಯು ರಜಸ್ವಲೆಯಾದ ದಿನದಿಂದ ಈ ಕೆಳಗಿನಂತೆ ಗರ್ಭವನ್ನು ಧರಿಸಿದರೆ ಆಯಾ ಪ್ರಕಾರದ ಸಂತತಿಯು ದೊರೆಯುವುದೆನ್ನುವುದು ನೀತಿ.
೪ನೇ ರಾತ್ರಿ : ಕಡಿಮೆ ಆಯಸ್ಸು ಇರುವ ಪುತ್ರ
೫ನೇ ರಾತ್ರಿ : ಪುತ್ರಿ
೬ನೇ ರಾತ್ರಿ : ಕುಟುಂಬವನ್ನು ಬೆಳೆಸುವ ಪುತ್ರ
೭ನೇ ರಾತ್ರಿ : ಬಂಜೆಯಾಗಿ ಉಳಿಯುವ ಪುತ್ರಿ
೮ನೇ ರಾತ್ರಿ : ಪುತ್ರ
೯ನೇ ರಾತ್ರಿ : ಸುಂದರಿಯಾದ ಪುತ್ರಿ
೧೦ನೇ ರಾತ್ರಿ : ಪ್ರಭಾವಶಾಲಿ ಉನ್ನತ ಶ್ರೇಣಿಯ ಪುತ್ರ
೧೧ನೇ ರಾತ್ರಿ : ದರಿದ್ರಳಾದ ಕುರೂಪಿ ಪುತ್ರಿ
೧೨ನೇ ರಾತ್ರಿ : ಶ್ರೀಮಂತನಾಗುವ ಪುತ್ರ
೧೩ನೇ ರಾತ್ರಿ : ದುಷ್ಟ ಮನಸ್ಸಿನ ಪುತ್ರಿ
೧೪ನೇ ರಾತ್ರಿ : ಕರ್ತವ್ಯನಿಷ್ಠ ಹಾಗೂ ಉದಾತ್ತ ಪುತ್ರ
೧೫ನೇ ರಾತ್ರಿ : ಶ್ರೀಮಂತಳಾಗುವ ಹಾಗೂ ಅದೃಷ್ಟವಂತೆ ಪುತ್ರಿ
೧೬ನೇ ರಾತ್ರಿ : ವಿದ್ಯಾವಂತ ಹಾಗೂ ಬುದ್ಧಿವಂತ ಪುತ್ರ
ಗರ್ಭಾಧಾನ ಸಂಸ್ಕಾರದಿಂದ ದೋಷಗಳು ಪರಿಹಾರವಾಗಿ ಉತ್ತಮ ಸಂತತಿಯನ್ನು ಪಡೆಯುವರೆನ್ನುವುದು ನಂಬಿಕೆ.
(ಷೋಡಶ ಸಂಸ್ಕಾರ (೨) - ಪುಂಸವನ --> ಮುಂದೆ ಓದಿ)
" ನಮ್ಮ ಉತ್ತಮ ಸಂಸ್ಕೃತಿಯನ್ನು ಉಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಹೊಸ ಶಿಕ್ಷಣ ಶೈಲಿಯಿಂದಾಗಿ ನಮ್ಮ ಉತ್ತಮ ಸಂಸ್ಕೃತಿಗಳು ""ಅವೆಲ್ಲವೂ ಕುರುಡು ನಂಬಿಕೆಗಳು"" ಎಂದು ಪರಿಗಣಿಸಿ ತಿರಸ್ಕರಿಸಲ್ಪಡುತ್ತವೆ. ಅಂತಿಮವಾಗಿ ಪ್ರಸ್ತುತ ಸನ್ನಿವೇಶವು ನಾವು ಅನುಸರಿಸುತ್ತಿದ್ದ ಪವಿತ್ರ ಸಂಸ್ಕೃತಿಯನ್ನು ಅನುಸರಿಸಲು ಅನಿವಾರ್ಯ ಮಾಡಿತು.
ReplyDeleteನಿನ್ನ ಹುಟ್ಟು ಹಬ್ಬದಂದು ಪ್ರಕಟವಾದ ಈ ಸಾಹಿತ್ಯ ಸಂಚಿಕೆಯು ಸಮಯೋಚಿತವಾಗಿ ಮಾನ್ಯವಾಗಿದೆ ಮತ್ತು ವಿಷಯಗಳು ಪ್ರಶಂಸನೀಯವಾಗಿವೆ. ಒಳ್ಳೆಯ ಕೆಲಸ. ಹೀಗೇ ಮುಂದುವರಿಸು. ಒಳ್ಳೆಯದಾಗಲಿ."
ಧನ್ಯವಾದಗಳು. ತಮ್ಮ ಆಶೀರ್ವಾದ ಹಾಗೂ ಶುಭ ಹಾರೈಕೆಯೇ ನನಗೆ ಪ್ರೋತ್ಸಾಹ ನೀಡುವ ಶಕ್ತಿ.
Delete