"ಜನ್ಮನಾ ಜಾಯತೇ ಜಂತುಃ " - ಅಂದರೆ ಹುಟ್ಟಿದಾಗ ಎಲ್ಲರೂ ಕೇವಲ ಜಂತುಗಳಾಗಿರುತ್ತಾರೆ. ಹುಟ್ಟಿನಿಂದಲೇ ಯಾರೂ ಸುಸಂಸ್ಕೃತರಲ್ಲ. ಚಿನ್ನದ ಅದಿರನ್ನು ಯಾವ ರೀತಿ ಸಂಸ್ಕರಿಸಿ ವಿವಿಧ ಆಕಾರ ನೀಡಿ ಉಪಯೋಗಿಸುತ್ತಾರೋ ಅಂತೆಯೇ ಮನುಷ್ಯನನ್ನೂ ಷೋಡಶ ಸಂಸ್ಕಾರಗಳಿಂದ ಸಂಸ್ಕರಿಸಿ ಧರ್ಮಕರ್ಮಾನುಚರಣೆ ಆಚರಿಸುವಂತೆ ಮಾಡಬೇಕು. ಆ ಮೂಲಕ ಸುಸಂಸ್ಕಾರ ಪ್ರತಿಯೊಬ್ಬರಿಗೂ ಅತ್ಯಗತ್ಯ. ವೇದವು ನಮ್ಮೆಲ್ಲರಿಗೆ ಎಲ್ಲಾ ವಿಷಯಗಳಿಗೆ ಹೇಗೆ ಪ್ರಮಾಣವೋ ಹಾಗೆಯೇ ಪರಂಪರಾಗತವಾದ ಸದಾಚಾರವೂ ಪ್ರಮಾಣವಾಗಿದೆ.
"ಯಸ್ಮಾತ್ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸಧರ್ಮಃ " - ಅಂದರೆ, ಯಾವುದರಿಂದ ನಮ್ಮೆಲ್ಲರ ಅಭ್ಯುದಯ ಹಾಗೂ ಶ್ರೇಯಸ್ಸು ಸಾಧ್ಯವೋ ಅದೇ ಧರ್ಮವು. ಆದುದರಿಂದ ಆ ಮಾರ್ಗದಲ್ಲಿ "ಶ್ರದ್ಧೆ"ಯಿಂದ ನಡೆದರೆ ನಮಗೆ ಒಳಿತು ಖಂಡಿತ. ಅದಿಲ್ಲದಿದ್ದರೆ, ಆ ಕರ್ಮದಿಂದ ಸಿಗುವ ಫಲ ನಮಗೆ ದೊರೆಯದು. ನಾವೇ ತಪ್ಪಿಸಿಕೊಂಡಂತೆ. ವೈಜ್ಞಾನಿಕವಾಗಿಯೂ, ಅನುಭವದಿಂದಲೂ "ವೈದಿಕ ಕರ್ಮಾಚರಣೆ ತುಂಬಾ ಪರಿಣಾಮಕಾರಿ." ಎಂಬ ಇಂದಿನ ಶೋಧ ಗಮನಾರ್ಹವಾದದ್ದು. ಅಲ್ಲದೆ, ನಮ್ಮ ಸುಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಇನ್ನು ಸಂಸ್ಕಾರದ ಕಾಲದ ವಿಷಯದಲ್ಲಿ ಹೇಳುವುದಾದರೆ, ಈ ಸಂಸ್ಕಾರಾದಿಗಳನ್ನು ಆಯಾ ಕಾಲಕ್ಕೆ ಮಾಡುವುದು ಒಳ್ಳೆಯದು. ಅನಿವಾರ್ಯದಲ್ಲಿ "ಅಕರಣೌ ಕರಣೌ ಶ್ರೇಯಃ" ಎಂಬಂತೆ ಯಾವುದೇ ಸತ್ಕಾರ್ಯವನ್ನು ಮಾಡದೆ ಇರುವುದಕ್ಕಿಂತ ಮಾಡುವುದು ಶ್ರೇಯಸ್ಕರ.
ಆದುದರಿಂದ, ಶಿವಳ್ಳಿ ಬ್ರಾಹ್ಮಣರು ಕೂಡ ಎಲ್ಲಾ ಸತ್ಕಾರ್ಯಗಳನ್ನು ತಮ್ಮ ತಮ್ಮ ವೇದದ ಆಚರಣೆಗಳ ಪ್ರಕಾರ ನಡೆಸುತ್ತಾ ಬರುತ್ತಾರೆ. ಒಂದೊಂದು ವೇದಗಳನ್ನು ಆಧಾರವಾಗಿರಿಸಿಕೊಂಡವರು ಒಂದೊಂದು ರೀತಿಯಲ್ಲಿ ಆಚರಣೆಗಳನ್ನು ಮಾಡುತ್ತಿರುತ್ತಾರೆ. ಈ ಭೂಮಿಯಲ್ಲಿ ಜನಿಸಿದ ಎಲ್ಲಾ ಬ್ರಾಹ್ಮಣರಿಗೂ ಸ್ವಜಾತಿ ವಿಹಿತ ಸಂಸ್ಕಾರಗಳು ಅವಶ್ಯವಾಗಿ ಪೂರೈಸಬೇಕಾದ ಕರ್ತವ್ಯಗಳಾಗಿವೆ. ಬ್ರಾಹ್ಮಣನಿಗೆ ಆಚರಿಸಲು ಷೋಡಶಸಂಸ್ಕಾರಗಳನ್ನು ಸ್ಮೃತಿಗಳಲ್ಲಿ ಮತ್ತು ಗೃಹಸೂತ್ರಗಳಲ್ಲಿ ಹೇಳಲಾಗಿದೆ. ವಿಹಿತಕಾಲದಲ್ಲಿ ನಡೆಸುವ ಈ ಸಂಸ್ಕಾರಗಳಿಂದ ಅವನ ಆತ್ಮ ಮತ್ತು ಮನಸ್ಸು ಪರಿಷ್ಕಾರ ಹೊಂದಿ ಸದಾಚಾರಸಂಪನ್ನ, ಸುಸಂಸ್ಕೃತ ಮಾನವನೆಂದೆನಿಸಿ ಇಹಪರದಲ್ಲಿ ಸುಖಿಯಾಗಬಲ್ಲನು. ಆದರೆ, ಇಂದಿನ ಲೌಕಿಕ ಶಿಕ್ಷಣ ಕ್ರಮ ಮತ್ತು ಆಧುನಿಕ ಜೀವನ ವ್ಯವಸ್ಥೆಯಿಂದಾಗಿ ಕೆಲವು ಸಂಸ್ಕಾರಗಳು ರೂಢಿಯಲ್ಲಿಲ್ಲ.
ಬದುಕು ಬಂಗಾರವಾಗಬೇಕೆಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ನಶ್ವರವಾಗುವ ಈ ಶರೀರದೊಂದಿಗೆ ಚಂಚಲವಾದ ಮನಸ್ಸನ್ನು ಬುದ್ಧಿಯಿಂದ ತಿದ್ದಿ, ಧಾರ್ಮಿಕವಾದ ಮಾರ್ಗದಲ್ಲಿ ಚಲಿಸಿ, ಆಧ್ಯಾತ್ಮಿಕ ಜ್ಞಾನದಿಂದ ಆತ್ಮವನ್ನು ತೃಪ್ತಿಪಡಿಸಿದಾಗಲೇ ಬದುಕು ಬಂಗಾರವಾಗಬಲ್ಲದು. ವ್ಯಾವಹಾರಿಕ ಜೀವನದಿಂದ ಗಳಿಸಿದ ಸಂಪತ್ತು, ಸ್ತ್ರೀ- ಗೃಹಾದಿ ಸುಖಗಳು ಕೇವಲ ತಾತ್ಕಾಲಿಕ. ಧಾರ್ಮಿಕ ಬುದ್ಧಿಯ ಧರ್ಮಗಳ ಮಾರ್ಗದಲ್ಲಿರುವುದೇ ನಿಜವಾದ ಸುಖ.
ಇಂದು ಸಮಾಜದಲ್ಲಿ ಕೆಲವೇ ಸಂಸ್ಕಾರಗಳು ಬಳಕೆಯಲ್ಲಿದೆ. ಕೇವಲ ಧಾರ್ಮಿಕ ಮುಖವಾಡದೊಂದಿಗೆ ನಡೆಸುವ ಸಂಸ್ಕಾರ ಕ್ರಿಯೆಗಳು ತಮ್ಮ ನಿಜವಾದ ಅರ್ಥ ಕಳೆದುಕೊಂಡು ವಾದ್ಯ, ಫೋಟೋ, ವಿಡಿಯೋ ಇತ್ಯಾದಿ ಗದ್ದಲಗಳಿಂದ ಕೊನೆಗೊಳ್ಳುತ್ತಿದೆ. ಪೌರೋಹಿತ್ಯವೂ ಇಂದು ವ್ಯಾವಹಾರಿಕವಾಗಿದೆ. ಇಂದು ಆಯಾ ಕೆಲಸಕ್ಕೆ ನಡೆಸಬೇಕಾದ ಸಂಸ್ಕಾರ ಕ್ರಿಯೆಗಳ ವಿಶೇಷತೆ, ಅಗತ್ಯ, ಅದರ ನಿಜವಾದ ಅರ್ಥವನ್ನು ತಿಳಿಸಿ ಎಲ್ಲರನ್ನೂ ಸುಸಂಸ್ಕೃತರನ್ನಾಗಿ ಮಾಡುವುದು ಅತಿ ಅಗತ್ಯವಿದೆ. ಹಾಗೆಯೇ, ಬ್ರಾಹ್ಮಣರಿಗಾಗಿ "ಷೋಡಶಸಂಸ್ಕಾರ" ಎಂಬ ಹದಿನಾರು ವಿಧದ ಆಚರಣೆಗಳನ್ನು ಹಿಂದಿನ ಶ್ರೇಷ್ಠ ಋಷಿಗಳು ತಮ್ಮ ಸ್ಮೃತಿಗಳಲ್ಲಿ ಬರೆದಿರುವರು. ಋಗ್ವೇದದ ಆಧಾರದಲ್ಲಿ ನೀಡಿರುವ ಆ ೧೬ ವಿಧದ ಆಚರಣೆಗಳನ್ನು ಈ ಮುಂದಿನಂತೆ ಆಚರಿಸಲಾಗುತ್ತದೆ.
(ಮುಂದೆ ಓದಿ)
No comments:
Post a Comment