।। ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ।
ತಮೋsರಿಮ್ ಸರ್ವಪಾಪಘ್ನಮ್ ಪ್ರಣತೋsಸ್ಮಿ ದಿವಾಕರಂ ।।
"ಜಪಾಕುಸುಮ ಅಂದರೆ ದಾಸವಾಳದ ಹೂವಿನಂತೆ ಕೆಂಪಗಿನ ಬಣ್ಣ ಹೊಂದಿರುವ ಕಾಶ್ಯಪ ಮಹರ್ಷಿಯ ಸುತನಾದ, ಅತೀವವಾದ ಪ್ರಕಾಶವುಳ್ಳ, ಅಂಧಕಾರದ ಶತ್ರುವಾದ, ಸರ್ವ ಪಾಪಗಳನ್ನು ನಶಿಸುವ ಶಕ್ತಿಯುಳ್ಳ ಸೂರ್ಯದೇವನಿಗೆ ಮನಃ ಪೂರ್ವಕವಾಗಿ ಭಕ್ತಿಯಿಂದ ನಮಿಸುತ್ತೇನೆ" ಎಂದು ಹೇಳುತ್ತಾ ದಿನವನ್ನು ಪ್ರಾರಂಭಿಸುವ ಜನ ನಾವು ಶಿವಳ್ಳಿ ಬ್ರಾಹ್ಮಣರು.
"ಶಕ್ತಿಗಿಂತಲೂ ಯುಕ್ತಿ ಮೇಲು" - ಈ ನುಡಿಯ ಪ್ರಕಾರ ಶಕ್ತಿ ಅಥವಾ ಶರೀರದ ಬಲಕ್ಕಿಂತಲೂ ಮಿಗಿಲಾದುದು ಯುಕ್ತಿ ಅಥವಾ ಮನಸ್ಸಿನ ಬಲ, ಚಿಂತನಾಶೀಲತೆ. ಈ ಚಿಂತನಾಶೀಲತೆ ಅಥವಾ ಯುಕ್ತಿಯ ವೃದ್ಧಿಯಾಗಬೇಕಾದರೆ ಮನುಷ್ಯನಿಗೆ ಸಂಸ್ಕಾರ ಅತ್ಯಗತ್ಯ. ಸಂಸ್ಕಾರವಿದ್ದಾಗ ಮನಸ್ಸು ಸ್ಥಿಮಿತದಲ್ಲಿದ್ದು ಜ್ಞಾನಾಭಿವೃದ್ಧಿಗೆ ಎಡೆ ಮಾಡಿಕೊಡಬಹುದು.
"ಸಾಮಾನ್ಯ ರೂಪದಲಿ, ಸಂಸಾರಿ ವೇಷದಲಿ ।
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ।।
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು ।
ತಾಮಸಿಗೆ ವರವೆಲ್ಲಿ? - ಮಂಕುತಿಮ್ಮ ।।"
- ಡಿ. ವಿ. ಜಿ ಯವರ "ಮಂಕುತಿಮ್ಮನ ಕಗ್ಗ"ದ ಪ್ರಕಾರ ದೇವರು ನಮ್ಮೆಡೆಗೆ ಸಾಮಾನ್ಯ ರೂಪದಲ್ಲಿಯೋ, ಸಂಸಾರಿಯ ವೇಷ ಧರಿಸಿಯೋ ಬರಬಹುದು. ಆ ದೇವರನ್ನು ಗುರುತಿಸಬೇಕಾದರೆ ನಮಗೆ ಸಂಸ್ಕಾರವಿರಬೇಕು. ತಾಮಸಗುಣದವರಿಗೆ ಆತ ದೊರಕಲಾರನು. ಹಾಗಾದರೆ, ನಮಗೆ ಸಂಸ್ಕಾರವೆಂಬುದು ಇರಲೇಬೇಕು. ಈ ಸಂಸ್ಕಾರವು ಪ್ರತಿಯೊಬ್ಬನಿಗೂ ತನ್ನ ಕುಟುಂಬದ ಆಚಾರ-ವಿಚಾರಗಳಿಂದಾಗಿ ಬರುತ್ತದೆ.
ಶಿವಳ್ಳಿ ಬ್ರಾಹ್ಮಣರ ಸಂಸ್ಕಾರವು ವಿಧೇಯ ಸಂಸ್ಕಾರಗಳಾಗಿದ್ದು ಪ್ರೀತಿ -ವಿಶ್ವಾಸಗಳಿಂದ ಕೂಡಿದುದಾಗಿದ್ದು ಜಗತ್ತಿನಲ್ಲಿಯೇ ಶ್ರೇಷ್ಠ ಸಂಸ್ಕಾರವೆಂದು ಪರಿಗಣಿಸಲ್ಪಟ್ಟಿದೆ. ಈ ಬ್ರಾಹ್ಮಣರ ಸಂಸ್ಕಾರಗಳ ಕಿರುಪರಿಚಯವನ್ನು ಈ ಆಧ್ಯಯನಿಕ ಕಿರುಪ್ರಬಂಧದ ಮೂಲಕ ನಮ್ಮ ಸುತ್ತಲಿನ ಆಚರಣೆಗಳ ಅಧ್ಯಯನ ಪ್ರಬಂಧವಾಗಿ ತಮ್ಮೆಲ್ಲರಿಗೂ ಓದಲು ಈ ಬ್ಲಾಗ್ ಮೂಲಕ ಅಭಿವ್ಯಕ್ತ ಪಡಿಸಲು ಸಂತೋಷಪಡುತ್ತೇನೆ. ಇದಕ್ಕಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಯಾವುದೇ ಕಾರ್ಯವನ್ನು ಮಾಡಲು ಗುರುಹಿರಿಯರ ಆಶೀರ್ವಾದ ಅತ್ಯಗತ್ಯ. ದೈವಾನುಗ್ರಹ ಗುರುಹಿರಿಯರ ಆಶೀರ್ವಾದ ಹಾಗೂ ಇವುಗಳಿಂದಾಗಿ ನನ್ನಲ್ಲಿ ಬೆಳೆದಿರುವ ಸಾಹಿತ್ಯದಲ್ಲಿನ ಆಸಕ್ತಿ ನನಗೆ ಈ ಲೇಖನಗಳನ್ನು ಬರೆಯಲು ಪ್ರಚೋದಿಸಿತು. ಇದಕ್ಕೆ ತಮ್ಮ ವಿದ್ವತ್ತಿನ ಬಿಂದುಗಳನ್ನು ನನಗೆ ನೀಡಿದ್ದ ಈಗ ದಿವಂಗತರಾಗಿರುವ ನನ್ನ ಅಜ್ಜ ವೇದಮೂರ್ತಿ ಶ್ರೀ ರಾಮ ತಂತ್ರಿಗಳಿಗೆ ನಾನು ಹೃತ್ಪೂರ್ವಕವಾಗಿ ವಂದಿಸುತ್ತಾ ಅವರ ಆಶೀರ್ವಾದಗಳೊಂದಿಗೆ ಈಗ ಈ ಬ್ಲಾಗ್ ಮೂಲಕ ನನ್ನ ಲೇಖನವನ್ನು ನಿಮ್ಮೆಲ್ಲರ ಆರ್ಜನೆಗೆ ಬಿಟ್ಟುಕೊಡುತ್ತಿದ್ದೇನೆ. ಈ ಲೇಖನ ಬರೆಯಲು ಸ್ಪೂರ್ತಿ ನೀಡಿ ತಮ್ಮ ಜ್ಞಾನದ ತುಣುಕುಗಳನ್ನು ನನಗೆ ನೀಡಿದ ನನ್ನ ಸೋದರಮಾವ ವೇದಮೂರ್ತಿ ಶ್ರೀ ರಾಧಾಕೃಷ್ಣ ತಂತ್ರಿಗಳು, ಮಾತಾಪಿತೃಗಳಾದ ಶ್ರೀ ಪೆದಮಲೆ ವೇದವ್ಯಾಸ ಭಟ್ ಹಾಗೂ ಶ್ರೀಮತಿ ಹೀರಾ ಹಾಗೂ ಬಂಧುವಾದ ಶ್ರೀ ಏನ್ ರವೀಶ್ ಮೂಡಿತ್ತಾಯ ಇವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಓದುಗರೆಲ್ಲರಿಗೂ ಈ ಕೃತಿಯು ಜ್ಞಾನವನ್ನಿತ್ತು "ಶಿವಳ್ಳಿ ಬ್ರಾಹ್ಮಣರ ಸಂಸ್ಕೃತಿ"ಯ ಪರಿಚಯ ತಿಳಿಯಲಿ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.
ತಮ್ಮ ವಿಶ್ವಾಸಿ,
ದೀಪಲಕ್ಷ್ಮಿ ಭಟ್.
(ವಿ.ಸೂ. ಈ ಕೃತಿಯನ್ನು ಸುಮಾರು ೧೫ ವರ್ಷಗಳ ಹಿಂದೆ ರಚಿಸಲಾಗಿದೆ.. )
ReplyDeleteಉತ್ತಮ ಕೆಲಸ. ಹೀಗೇ ಮುಂದುವರಿಸು
ಧನ್ಯವಾದಗಳು Roopakka...
DeleteVery good and wish you a success in all your future projects. Excellent work done.
ReplyDeleteThank you...Your Wishes will encourage me to write more..:-)
Delete