Monday, 15 June 2020

ಷೋಡಶ ಸಂಸ್ಕಾರ (೨) - ಪುಂಸವನ

ಪತ್ನಿಯು ಗರ್ಭಧರಿಸಿದ ಮೂರನೆಯ ತಿಂಗಳಿನಲ್ಲಿ ಪುಂಸವನ - ಅನವಲೋಭನ ಸಂಸ್ಕಾರ ನಡೆಸಬೇಕು. ಆದರೆ ಇಂದು ಈ ಸಂಸ್ಕಾರವನ್ನು ಸೀಮಂತದ ದಿನವೇ ನಡೆಸುತ್ತಾರೆ. ಪುಂಸವನ, ಅನವಲೋಭನ, ಸೀಮಂತ ಹಾಗೂ ವಿಷ್ಣುಬಲಿ  ಎಂಬ ಸಂಸ್ಕಾರಗಳನ್ನು ತಂತ್ರದ ಮೂಲಕ ನಡೆಸುವಲ್ಲಿ ಪುಣ್ಯಾಹವಾಚನ ಮಾಡಿ ನಾಂದೀಶ್ರಾದ್ಧ ಸಂದರ್ಭದಲ್ಲಿ "ಕ್ರತುದಕ್ಷರು" ಎಂಬ ವಿಶ್ವದೇವತೆ ಪುರಸ್ಸರ ಶ್ರಾದ್ಧ ಮಾಡಿ. "ಮಂಗಲ" ಎಂಬ ಅಗ್ನಿಯನ್ನು ಪ್ರತಿಷ್ಠಾಪಿಸಿ, ಅನ್ವಾಧಾನ ಮಾಡುವುದು. ಪ್ರಜಾಪತಿಗೆ ಒಂದು ಚರು ಆಹುತಿ ಹಾಗೂ ಧಾತೃದೇವತೆಗೆ ಎರಡು ಆಹುತಿ, ರಾಕಾದೇವತೆಗೆ ಎರಡು, ವಿಷ್ಣುವಿಗೆ ಮೂರು, ಪ್ರಜಾಪತಿಗೆ ಒಂದು ಅಜ್ಯಾಹುತಿಗಳೆಂದೂ, ಮಧ್ಯೆ ಧಧಿಪ್ರಾಶನ, ರಸನೇಚನ, ಸೀಮಂತೋನ್ನಯನಾದಿ ಗ್ರಹ್ಯೋಕ್ತವಿಧಿಗಳು ಗಮನಾರ್ಹ. 


ನಿರ್ವಾಪ ಮಾಡಿ ಚರು ಸಿದ್ಧಗೊಳಿಸಿ ಪತಿಯು ಪತ್ನಿಗೆ ಬಲಕೈಯನ್ನು ಶುದ್ಧಗೊಳಿಸಿ, ತುಂಬ ಮೊಸರು ಹಾಕಿ ಮಧ್ಯದಲ್ಲಿ ದೃಢವಾದ ಅಕ್ಕಿಯೊಂದನ್ನು ಪಾರ್ಶ್ವಗಳಲ್ಲಿ ಪುಷ್ಟವಾದ ಎರಡು ಉದ್ದಿನ ಕಾಳುಗಳನ್ನೂ ಇಟ್ಟು ಪ್ರಾಶನ ಮಾಡಿಸಬೇಕು. ಹೀಗೆ ಮೂರು ಸಾರಿ ಮಾಡಿ ಪ್ರತಿಸಲವೂ ಆಚಮನ ಮಾಡಿಸಬೇಕು. ಆನಂತರ ಒಬ್ಬ ಕನ್ನಿಕೆ ಅಥವಾ ವಧುವಿನಿಂದಲೇ ಗರಿಕೆಯನ್ನು ರಸ ಬರುವಂತೆ ಜಜ್ಜಿ ಹಿಂಡಿಸಿ, ಶುದ್ಧ ವಸ್ತ್ರದ ಅಂಚಿನಿಂದ ಪ್ರಜಾವದಾಖ್ಯ, ಜೀವ ಪುತ್ರಾಖ್ಯ ಸೂಕ್ತಗಳೆರೆಡನ್ನೂ ಜಪಿಸಿ, ಪತಿಯು ಪತ್ನಿಯ ಹಿಂಬದಿಯಲ್ಲಿ ನಿಂತು, ಎಡಕೈಯಿಂದ ಆಕೆಯ ಮುಖವನ್ನು ಹಿಂದಕ್ಕೆ ಮಾಡಿ ಬಲಮೂಗಿನಿಂದ ದೂರ್ವಾರಸವನ್ನು ಸಿಂಚನ ಮಾಡಬೇಕು. ನಂತರ, ಪತ್ನಿಯು ಆಚಮನ ಮಾಡಬೇಕು. ಅವಧಾನಧರ್ಮದಿಂದ ಚರುಹೋಮ  ಮಾಡಿ ಪತ್ನಿಯ ಹೃದಯವನ್ನು ಮುಟ್ಟಬೇಕು.


ಈ ಸಂಸ್ಕಾರದಿಂದಾಗುವ ಪ್ರಯೋಜನಗಳು ಹಲವಾರು. ಮೂರನೆಯ ತಿಂಗಳಿನಲ್ಲಿಯೇ ಮಾಡಬೇಕೆಂದು ಸ್ಮೃತಿ ತಿಳಿಸುತ್ತದೆ. ಏಕೆಂದರೆ, ಗರ್ಭಕೋಶದಲ್ಲಿ ದ್ರವರೂಪದಲ್ಲಿದ್ದ ಶುಕ್ಲ-ಶೋಣಿತಶಕ್ತಿಯು  ಘನರೂಪ ತಾಳುವ ಈ ತಿಂಗಳಿನಲ್ಲಿ ಇಂದ್ರಿಯೋತ್ಪತ್ತಿಯಾಗುವುದೆಂದೂ, ಈ ಸಂಸ್ಕಾರದಲ್ಲಿ ಹೇಳುವ ಮಂತ್ರಗಳು ಹಾಗೂ ಪ್ರಜಾವಾದಾಖ್ಯ- ಜೀವಪುತ್ರಾಖ್ಯ ಮಂತ್ರಗಳಿಂದ ದೂರ್ವಾರಸಸೇಚನದಿಂದ ಎರಡು ಹೃದಯವುಳ್ಳ ಗರ್ಭಿಣಿ ಸ್ತ್ರೀಯರಿಗೆ ಉಂಟಾಗಬಹುದಾದ ಬಯಕೆಗಳು ಅತಿಯಾಗದೆ, ಶಿಶುವಿನ ಪೂರ್ಣ ಬೆಳವಣಿಗೆಗೆ ದೈವಿಕಶಕ್ತಿಯುಂಟಾಗುವುದೆಂದು ಸಾರುತ್ತಿದೆ. ಈ ಸಂಸ್ಕಾರವನ್ನು ಪ್ರತಿ ಗರ್ಭಧಾರಣೆ ಸಮಯದಲ್ಲೂ ನಡೆಸಬೇಕೆಂದೂ, ಸೀಮಂತದ ಜೊತೆಗೆ ಪ್ರಥಮ ಗರ್ಭವತಿಗೆ ನಡೆಸಿದಲ್ಲಿ ಪ್ರತಿ ಗರ್ಭದಲ್ಲೂ ಆಚರಿಸಬೇಕಾಗಿಲ್ಲವೆಂದೂ ಬೇರೆ ಬೇರೆ ಅಭಿಪ್ರಾಯಗಳಿವೆ.

(ಷೋಡಶ ಸಂಸ್ಕಾರ (೩) - ಸೀಮಂತ ---> ಮುಂದೆ ಓದಿ)

No comments:

Post a Comment

Featured post

ಷೋಡಶ ಸಂಸ್ಕಾರ (೮) - ಅನ್ನಪ್ರಾಶನ

ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ...

Popular Posts

Search This Blog