Monday, 8 June 2020

ಶಿವಳ್ಳಿ ಬ್ರಾಹ್ಮಣರ ಪೂರ್ವ ಷೋಡಶ ಸಂಸ್ಕಾರ

"ಪೂರ್ವ ಷೋಡಶ ಸಂಸ್ಕಾರ" ಅಂದರೆ ಮರಣ ಪೂರ್ವದಲ್ಲಿ ನಡೆಸುವ ಸಂಸ್ಕಾರಗಳು. ಜೀವಿತದಲ್ಲಿರುವಾಗ ಪ್ರತಿಯೊಂದು ಜನಿಸಿದ ಶಿಶುವಿಗೆ ಹುಟ್ಟಿದಂದಿನಿಂದ ಅಂತ್ಯಕಾಲದವರೆಗೆ ನಡೆಸಲೇಬೇಕಾದಂತಹ ಸಂಸ್ಕಾರಗಳು ಇವು.


"ಗರ್ಭಾಧಾನಂ ಪುಂಸವನಂ ಸೀಮಂತೋ ವೈಷ್ಣವೋ ಬಲಿಃ ।
ಜಾತಕಂ ನಾಮ ನಿಷ್ಕ್ರಾಮೋನ್ನಾಶನಂ ಚೌಳಕರ್ಮಂ ಚ।।

ಉಪನೀತಿ ಮಹಾನಾಮ್ನೀ ಮಹಾವ್ರತಮತಃ ಪರಮ್ ।
ಉಪನಿಷಚ್ಛ ಗೋದಾನಂ ಸಮಾವರ್ತನಮೇವ ಚ ।।

ವಿವಾಹಶ್ಚೈವ ಮಿತ್ಯೇತಾಃ ಸಂಸ್ಕಾರಾಃ ಷೋಡಶಕ್ರಿಯಾಃ ।
ಆಧಾನಾತ್ ಚೌಲಪರ್ಯಂತಾಃ ಸಂಸ್ಕಾರಾಃ ದೋಷಮಾರ್ಜನಾಃ ।।

ಬಂಧನಾತ್ ಸ್ನಾನಪರ್ಯಂತಾಃ ಅತಿಶಯಾಧಾನ ಮುಚ್ಯತೇ ।
ವೈವಾಹಿಕೇತಿ ಸಂಸ್ಕಾರಾಃ  ಸ್ಮೃತ ಊನಾಂಗ ಪೂರಣಃ ।।

ಸಂಸ್ಕಾರ ರಹಿತಾ ಏತು  ತೇಶಾಂ ಜನ್ಮ ನಿರರ್ಥಕಂ ।। "

- ಅಂದರೆ, " ಗರ್ಭಾಧಾನ , ಪುಂಸವನ, ಸೀಮಂತ, ವಿಷ್ಣುಬಲಿ , ಜಾತಕರ್ಮ, ನಾಮಕರಣ, ಉಪನಿಷ್ಕ್ರಮಣ, ಅನ್ನಪ್ರಾಶನ, ಚೌಲ, ಉಪನಯನ, ಮಹಾನಾಮ್ನೀ, ಮಹಾವ್ರತ, ಗೋದಾನವ್ರತ, ಸಮಾವರ್ತನ, ವಿವಾಹ - ಹೀಗೆ ಹದಿನಾರು ಮುಖ್ಯ ಸಂಸ್ಕಾರಗಳು ಮತ್ತು ಅನವಲೋಭನ, ಕರ್ಣವೇಧಾದಿ ಕೆಲವು ಉಪಸಂಸ್ಕಾರಗಳು. ಗರ್ಭಾಧಾನದಿಂದ  ಚೌಲದ  ತನಕ ಸಂಸ್ಕಾರಗಳು ಬೀಜ-ಕ್ಷೇತ್ರಗಳಲ್ಲಿ ಉಂಟಾದ ದೋಷಮಾರ್ಜನಗಳೆಂದೂ ಉಪನಯನ ಮೊದಲ್ಗೊಂಡು ಸಮಾವರ್ತನದ  ತನಕ ಸಂಸ್ಕಾರಗಳು ವಿಶೇಷ ಜ್ಞಾನಾರ್ಜನೆಯ ಸಾಧನೆಯ ಮೂಲಕ ಆಚಾರ ವಿಚಾರಗಳಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಅತಿಶಯವನ್ನುಂಟು ಮಾಡುವುದೆಂದೂ ಕೊನೆಯ ಮಹಾವಿಧಿಯು ಜೀವನದ ಸಾರ್ಥಕತೆಯ ಪೂರ್ಣತೆಯನ್ನು ಗಾಳಿಸುವುದೆಂದೂ ಜ್ಞಾನಿಗಳ ಮತ. ಮೇಲೆ ತಿಳಿಸಿದ ಸಂಸ್ಕಾರರಹಿತನಾದವನ ಬಾಳುವಿಕೆ ನಿರರ್ಥಕವೆಂದೂ ಸ್ಮ್ರಿತಿವಚನ."

ಈ ಶ್ಲೋಕದಿಂದ ಜೀವಿತಕಾಲದ ಹದಿನಾರು ಸಂಸ್ಕಾರಗಳು ಯಾವುವು ಎಂಬುದು ತಿಳಿಯುತ್ತದೆ. ಆ ಎಲ್ಲಾ ಹದಿನಾರು ಸಂಸ್ಕಾರಗಳನ್ನು ವಿವರವಾಗಿ ಮುಂದಿನ ಬ್ಲಾಗ್ ಗಳಲ್ಲಿಒಂದೊಂದಾಗಿ  ಓದಿ ತಿಳಿಯೋಣ.



ಪುನಃಸಂಧಾನ:
 
ದ್ವಿಜನೆನಿಸಿದ ಬ್ರಹ್ಮಚಾರಿಯು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆಗೆ "ಸಮುದ್ಭವ" ಎಂಬ  ಅಗ್ನಿಯ ಉಪಾಸನೆಯನ್ನೂ, ಸ್ನಾತಕವ್ರತಸ್ಥನಾಗಲು "ಸೂರ್ಯ" ಎಂಬ ಅಗ್ನಿಯ ಆರಾಧನೆಯನ್ನೂ, ಗ್ರಹಸ್ಥನಾಗಲು "ಯೋಜಕ" ಎಂಬ ಅಗ್ನಿಯ ಉಪಾಸನೆಯನ್ನೂ, ಬೆಳಿಗ್ಗೆ ಮತ್ತು ಮುಸ್ಸಂಜೆ ಕಾಲದಲ್ಲಿ ಮಾಡುತ್ತಾ ಇರಬೇಕು. ಇದನ್ನು ಸಾಯುವ ಕಾಲದವರೆಗೂ ಮಾಡುತ್ತಲೇ ಇರಬೇಕು. ವಿಸ್ತಾರವಾಗಿ ಮಾಡಲು ಅಸಾಧ್ಯವೆನಿಸಿದರೆ "ಅಜ್ಯೇನ ಜಲೇನ ವಾ" ಎಂದು ಸ್ಮೃತಿಗಳಲ್ಲಿ ತಿಳಿಸಿದಂತಾದರೂ ನಡೆಸಲೇ ಬೇಕು. ಉಪಾಸನೆ ನಡೆಸದಿದ್ದರೆ ಆತನಿಗೆ ಹಾಗೂ ಆತನ ಮಕ್ಕಳಿಗೆ ಸಂಸ್ಕಾರಾದಿಗಳನ್ನು ಮಾಡಲು ಅರ್ಹತೆಯು ಇರುವುದಿಲ್ಲ.  ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಗ್ರಹಾಗ್ನಿ ವಿಚ್ಛೇದನಾಗಿರಲು "ಪುನಃಸಂಧಾನ" ವಿಧಾನದಿಂದ ಅಗ್ನಿಯನ್ನು ಸಂಪಾದಿಸಬೇಕು. ನಂತರವಷ್ಟೇ ಅವನಿಗೆ ಹೋಮ, ಸಂಸ್ಕಾರಾದಿಗಳನ್ನು ಮಾಡಲು ಅರ್ಹತೆ ದೊರೆಯುವುದು.


ಸಂಸ್ಕಾರಾದಿಗಳನ್ನು ಮಾಡಲು ಅರ್ಹನಾದ ಮೇಲೆ ಪ್ರತಿಯೊಬ್ಬ ಋಗ್ವೇದಿಯ ಬ್ರಾಹ್ಮಣನಿಗೆ ಷೋಡಶಸಂಸ್ಕಾರಗಳನ್ನು ಆಚರಿಸಲಿರುತ್ತದೆ.



(ಮುಂದೆ ಓದಿ)

No comments:

Post a Comment

Featured post

ಷೋಡಶ ಸಂಸ್ಕಾರ (೮) - ಅನ್ನಪ್ರಾಶನ

ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ...

Popular Posts

Search This Blog