ಆರು ಅಥವಾ ಎಂಟನೇ ತಿಂಗಳಿನ ಗರ್ಭವತಿಗೆ ಈ ಸೀಮಂತ ವಿಧಿಯನ್ನು ಮಾಡಬೇಕು. ಸೀಮಂತಿನಿಯ ಮೊದಲ ಗರ್ಭವನ್ನು ತಿನ್ನಲು ಕೆಲವು ದುಷ್ಟ ಸ್ತ್ರೀಶಕ್ತಿಗಳೂ, ಮಾಯಾವಿಗಳೂ, ರಕ್ತ ಪಿಪಾಸುಗಳೂ ಹಾತೊರೆಯುವರು. ಅವರ ನಿರಾಸನಕ್ಕಾಗಿ ಪತಿಯು ಲಕ್ಷ್ಮೀದೇವಿಯನ್ನು ಮಂತ್ರದಿಂದ ಕರೆದಿರಬೇಕು. ಲಕ್ಷ್ಮೀದೇವಿಯು ವಿಶೇಷ ಸನ್ನಿಧಾನದಿಂದ ಮೋಹಿತರಾಗುವ ರಕ್ತ ಪಿಪಾಸುಗಳು ಹಾಗೂ ಮಾಯಾವಿಗಳು ಗರ್ಭವನ್ನು ಬಿಟ್ಟು ಹೋಗುವರೆಂಬ ನಂಬಿಕೆಯಿದೆ. ಮೊದಲ ಗರ್ಭಕ್ಕೆ ನಡೆಸಿದ ಸೀಮಂತ ಸಂಸ್ಕಾರ ಎಲ್ಲಾ ಗರ್ಭಕ್ಕೂ ಅನ್ವಯವಾಗುತ್ತದೆ. ಸೀಮಂತ ಸಂಸ್ಕಾರ ನಡೆಸದೇ ಇದ್ದರೆ ಹಾಗೂ ಹಾಗಿರುವಾಗಲೇ ಪ್ರಸವಿಸಿದರೆ, ಮಗುವನ್ನು ಮಡಿಲಲ್ಲಿಟ್ಟು ಮುಚ್ಚಿ ಸಂಸ್ಕಾರ ನಡೆಸಬೇಕೆಂದು ಸ್ಮೃತಿಯಲ್ಲಿ ಹೇಳಲ್ಪಟ್ಟಿದೆ.
ಮೊದಲಿಗೆ ಪ್ರಧಾನಜ್ಯಾಹುತಿ ಕೊಡಬೇಕು. ಸೀಮಂತೋನ್ನಯನ ಲಗ್ನ ಸುಲಗ್ನತಾ ಸಿದ್ಧಿಗೋಸ್ಕರ ಬ್ರಾಹ್ಮಣರಿಗೆ ತಾಂಬೂಲಫಲ ನೀಡಬೇಕು. ಗರ್ಭಿಣಿಯರೂ ಕೂಡಾ ಮುತ್ತೈದೆಯರಿಗೆ ಫಲದಾನ ನೀಡಬೇಕು. ಬ್ರಾಹ್ಮಣರು ಮಂಗಳಾಷ್ಟಕವನ್ನು ಪಠಿಸುತ್ತಿರಲು ಶುಭಮುಹೂರ್ತದಲ್ಲಿ ಪತಿಯು ಕಾಯಿಗಳೆರಡರಿಂದ ಕೂಡಿದ ಅತ್ತಿಗುಚ್ಛ, ಮೂರು ಬಿಳಿಬಣ್ಣವುಳ್ಳ ಶಲಲೀ, ಮೂರು ಎಸಳು ಪ್ರಾದೇಶಮಾತ್ರದ ಅಗ್ರಧರ್ಭೆಗಳನ್ನು ಜೊತೆಯಾಗಿ ಪತ್ನಿಯು ಪಶ್ಚಿಮ ಯಾ ಉತ್ತರಮುಖವಾಗಿ ದಕ್ಷಿಣದಲ್ಲಿ ನಿಂತುಕೊಂಡು ವ್ಯಾಹೃತಿ ಮಂತ್ರದಿಂದ ಆಕೆಯ ತಲೆಗೂದಲು- ಲಲಾಟ ಇವುಗಳ ಸಂಧಿಯ ಮಧ್ಯಭಾಗ ಬೈತಲೆಯಿಂದ ಮೇಲಕ್ಕೆ ಮೂರು ನಾಲ್ಕು ಸಲ ಗುರುತಿಸಬೇಕು.
ದೇಶಾಚಾರದಂತೆ ಉನ್ನಯನ ಕ್ರಮ ಹೀಗಿದೆ: ಇಡೀ ಅಡಿಕೆ ಎರಡನ್ನು ಹಂದಿಕಣೆಯೊಂದಿಗೆ ಸಂಯೋಜನ ಮಾಡಿ, ಚಿಕ್ಕ ಅತ್ತಿಗೊಂಚಲು ಶೃಂಗಾರ ಹೂ, ಇತರ ಐದು- ಏಳು ಸಾತ್ವಿಕವಾದ ಸುವಾಸನೆಯುಳ್ಳ ಹೂಗಳನ್ನು ಪೋಣಿಸಿ, ಅದನ್ನು ಶುದ್ಧಗೊಳಿಸಿ ಲಕ್ಷ್ಮಿಯನ್ನು ಆವಾಹಿಸಿ ಶ್ರೀಸೂಕ್ತದಿಂದ ಪೂಜಿಸಿ ಸುಮುಹೂರ್ತಕಾಲದಲ್ಲಿ ಲಕ್ಷ್ಮಿಸನ್ನಿಧಾನದ ಆ ಹೂವಿನ ಮುಕುಟವನ್ನು ಪತಿಯು ಧರ್ಭಅಂಕುರತ್ರಯಗಳಿಂದ ಉನ್ನಯನ ಮಾಡಿ ಸುವಾಸಿನಿಯರ ಸಹಾಯದೊಂದಿಗೆ ಪತ್ನಿಯ ನಡುನೆತ್ತಿಯಲ್ಲಿ ಕಟ್ಟಬೇಕು. ನಂತರ ಆಕೆಯ ಮಡಿಲಿಗೆ ೫ ವಿಧದ ಸಾತ್ವಿಕ ಹಣ್ಣುಗಳನ್ನು ಹಾಕಿ ಅಕ್ಕಿ ಹಾಕಿ ಉಡಿತುಂಬಬೇಕು. ಇವಿಷ್ಟು ಆಚಾರ ವಿಶೇಷ. ಆ ಸಮಯದಲ್ಲಿ ವೀಣಾವಾದನ ಸಹಿತವಾಗಿ ಬ್ರಾಹ್ಮಣರಿಂದ ಸಾಮಗಾನ ಮಾಡಿಸಬೇಕು. ಅಥವಾ ತಟಸಂಬಂಧ ಮಂತ್ರವನ್ನಾದರೂ ಮೂರು ಸಲ ಹೇಳಿಸುವುದು ವಿಶೇಷ. ನಂತರ ಹೋಮಶೇಷವನ್ನು ಮುಕ್ತಾಯಗೊಳಿಸಿ ಪತಿಪುತ್ರವತಿಯರಾದ ಸ್ತ್ರೀಯರು ದಂಪತಿಗಳಿಗೆ ನೀರಾಜನ ಮಾಡಿಸಬೇಕು. ಪತ್ನಿಯು ತಲೆಯಲ್ಲಿಟ್ಟ ಹೂಕಿರೀಟವನ್ನು ತೆಗೆದು, ಅಡಿಕೆಯನ್ನು ಪತ್ನಿಯ ಕೈಯಲ್ಲಿ ಕೊಟ್ಟು, ಹಂದಿಕಣೆಯನ್ನು ದೂರ ಬಿಸಾಡಿ, ಹೂಗಳನ್ನು ಕ್ಷೀರವೃಕ್ಷಕ್ಕೆ ಕಟ್ಟಬೇಕು. ಅಡಿಕೆಗಳನ್ನೂ ಆಕೆ ಶುದ್ಧಮಣ್ಣಿನಲ್ಲಿ ನೆಡಬೇಕು.
ಹೂ ಕಿರೀಟದ ವಿಶೇಷತೆ: ಈ ಹೂ ಕಿರೀಟವನ್ನು ಬೇರ್ಪಡಿಸುವ ಮೊದಲು ಮಕ್ಕಳಾಗದವರಿದ್ದಾರೆ, ಅವರು ಬಸುರಿಯ ಪ್ರಾಯಕ್ಕಿಂತ ಚಿಕ್ಕವಾಗಿದ್ದಲ್ಲಿ ಅವರ ತಲೆಗೆ ಇಟ್ಟರೆ ಹಾಗೂ ಅವರು ಬಸುರಿಯ ಪ್ರಾಯಕ್ಕಿಂತ ದೊಡ್ಡವರಾಗಿದ್ದಲ್ಲಿ ಮೊದಲಿಗೆ ಅವರ ಪಾದಕ್ಕೆ ಇತ್ತು ನಂತರ ಅವರ ತಲೆಯಲ್ಲಿಟ್ಟರೆ, ಆ ಸ್ತ್ರೀಯರಿಗೆ ಮಕ್ಕಳಾಗುವ ಸಂಭವವಿರುತ್ತದೆ.
ಈ ಆಚರಣೆಯನ್ನು ಬಂಜೆಯರಿಗೆ ಮೂಲಿಗೆಯಂತೆ ಬಳಸಲಾಗುತ್ತದೆ.
(ಷೋಡಶ ಸಂಸ್ಕಾರ (೪) - ವಿಷ್ಣುಬಲಿ ---> ಮುಂದೆ ಓದಿ)
No comments:
Post a Comment