Thursday, 18 June 2020

ಷೋಡಶ ಸಂಸ್ಕಾರ (೫) - ಜಾತಕರ್ಮ

ಷೋಡಶ ಸಂಸ್ಕಾರದ ಐದನೇ ಕರ್ಮವೇ - "ಜಾತಕರ್ಮ".  ಮಗು ಹುಟ್ಟಿದ ತಕ್ಷಣ, ಅದರ ಹೊಕ್ಕುಳಬಲ್ಲು ಕತ್ತರಿಸುವ ಮುನ್ನ, ಅಥವಾ ಜಾತಾಶೌಚ ಮುಗಿದ ಕೂಡಲೇ ಜಾತಕರ್ಮ ಸಂಸ್ಕಾರವು ಆಗಬೇಕು.  ಅನಂತರದ ದಿನಗಳಲ್ಲಾದರೆ ಶುಭಮುಹೂರ್ತಕಾಲಗಳಲ್ಲಿ ನಡೆಸಬೇಕು. ಮಗುವಿನ ಮೊದಲ ಸಂಸ್ಕಾರವಾದ ಇದು ಮಾತೃಗರ್ಭದ ನೀರಿನ ಸೇವನೆಯಿಂದ ಉಂಟಾದ ದೋಷ ಇವಾರಣೆಗೆಂದು ಹೇಳಿದೆ. ಇದರಿಂದ ಮೇಧಾಶಕ್ತಿ, ಆಯುಷ್ಯ, ತೇಜಸ್ಸು ಅಭಿವೃದ್ಧಿಯಾಗುವುದು.

ಈ ಸಂಸ್ಕಾರವನ್ನು ಮಗು ಹುಟ್ಟಿದಾಕ್ಷಣ ಮಾಡಬೇಕೆಂದಿದ್ದರೂ ಇಂದಿನ ಲೋಕಾಚಾರ ಪ್ರಕಾರ ಹನ್ನೊಂದನೇ ಅಥವಾ ಹನ್ನೆರೆಡನೆ ದಿನ (ಅಥವಾ ನಾಮಕರಣದ ಜೊತೆಗೆ) ಆಚರಿಸುವುದು ಬಳಕೆಯಾಗಿದೆ. ಆ ದಿನ ಪಂಚಗವ್ಯಪ್ರಾಶನ. ಉಪವೀತಧಾರಣೆ, ಮಾಡಿಕೊಂಡು ಪುಣ್ಯಾಹವಾಚನ, ಅಭ್ಯುದಯಿಕ ಶ್ರಾದ್ಧಾದಿಗಳನ್ನು ಮುಗಿಸಿ ಪತ್ನಿಯು ತಾತ್ಕಾಲಿಕ ಮೈಶುದ್ಧಿಗಾಗಿ ಕಲಶಗ್ರಹಣವಿಧಿ ನಡೆಸಬೇಕು. ನಂತರ ಸ್ವಚ್ಛವಾದ ಶಿಲಾತಲದಲ್ಲಿ ಸಮಪ್ರಮಾಣ ಆಗದಂತೆ ಜೇನು, ತುಪ್ಪ (ಬೆಣ್ಣೆ) ಬೆರೆಸಿ ಬಜೆ ಬೇರನ್ನು ಜೊತೆಯಾಗಿ ತೇದು ಅದರೊಂದಿಗೆ ಸುವರ್ಣವನ್ನು ತಿಕ್ಕಿ, ಚಿನ್ನದಿಂದಲೇ ಶಿಶುವಿಗೆ ಪ್ರಾಶನ ಮಾಡಬೇಕು. ಆ ಚಿನ್ನವನ್ನು ತೊಳೆದು ಶಿಶುವಿನ ಬಲ, ಎಡ ಕಿವಿಗಳಿಗೆ ಸ್ಪರ್ಶಮಾಡಬೇಕು. ಶಿಶುವಿನ ಎರಡುಭುಜಗಳನ್ನು ಸ್ಪರ್ಶಿಸಿ, ಸೊಂಟಕ್ಕೆ ಎಕ್ಕೆಗಿಡದ ಸೂತ್ರವನ್ನು ನೂಲಿನಂತೆ ಕಟ್ಟಬೇಕು. ಶಿಶುವಿನ ನೆತ್ತಿಯನ್ನು ಆಘ್ರಾಣಿಸಬೇಕು. ತಾಯಿಯು ಶಿಶುವಿಗೆ ಸ್ತನ್ಯಪಾನ ಮಾಡಿಸಬೇಕು.

ಹೆಣ್ಣು ಮಗುವಿಗಾದರೆ ಮೇಲೆ ತಿಳಿಸಿದ ಎಲ್ಲ ವಿಧಗಳನ್ನು ಆಮಂತ್ರಕವಾಗಿ ನಡೆಸಬೇಕೆಂದು ಋಷಿಗಳು ಹೇಳಿರುವರು.

(ಷೋಡಶ ಸಂಸ್ಕಾರ (೬) -  ನಾಮಕರಣ --> ಮುಂದೆ ಓದಿ)

No comments:

Post a Comment

Featured post

ಷೋಡಶ ಸಂಸ್ಕಾರ (೮) - ಅನ್ನಪ್ರಾಶನ

ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ...

Popular Posts

Search This Blog