ಯುಗಯುಗಾಂತರಗಳಿಂದಲೂ ಮಾನವರು ನಂಬಿಕೊಂಡು ಬಂದ ಪ್ರಕಾರ, ಪ್ರತಿಯೊಬ್ಬರಿಗೂ ಏಳು ಜನ್ಮಗಳಿವೆ. ಎಲ್ಲಾ ಜನ್ಮಗಳಿಗಿಂತಲೂ ಮಾನವ ಜನ್ಮ ಶ್ರೇಷ್ಠವಾದುದು. ಬ್ರಹ್ಮಸೃಷ್ಟಿಯಲ್ಲಿ ಜನಿಸಿ ಜಗತ್ತಿನಲ್ಲಿ ಬದುಕುವ ಎಲ್ಲಾ ಪ್ರಾಣಿವರ್ಗದ ಎಲ್ಲಾ ಜೀವಜಂತುಗಳಲ್ಲಿ ಮಾನವನು ಶ್ರೇಷ್ಠನಾದವನು. ಅಂಥ ಮಾನವರಲ್ಲಿ ಬ್ರಾಹ್ಮಣ ಜನ್ಮವನ್ನು ಅತಿ ಶ್ರೇಷ್ಠವಾದುದೆಂದು ನಂಬಲಾಗಿದೆ.
"ಜನ್ಮನಾ ಜಾಯತೇ ಜಂತುಃ" - ಹುಟ್ಟಿದಾಗ ಪ್ರಾಣಿಗಳಂತೆ ಕೇವಲ ಜಂತುವಾಗಿ ಹುಟ್ಟುವ ಮನುಷ್ಯನು ಸಂಸ್ಕಾರಗಳಿಂದ ಬ್ರಾಹ್ಮಣನಾಗಿ ಉತ್ಕ್ರಾಂತನಾಗುತ್ತಾನೆಂದು ಮಹಾತಪಸ್ವಿಗಳಾದ ಋಷಿಮುನಿಗಳೇ ಬರೆದಿಟ್ಟಿರುತ್ತಾರೆ. ಇದರ ಪ್ರಕಾರ "ಬ್ರಾಹ್ಮಣ್ಯ" ಎಂದರೇನು? - ಬ್ರಾಹ್ಮಣ್ಯ ಎಂದರೆ "ಮಹಾ ತೇಜಸ್ಸಿನ ಸಂಪತ್ತು." ಎಂದು ತಾತ್ಪರ್ಯವಾಗಿ ಹೇಳಬಹುದು. "ಬ್ರಹ್ಮ" ಅರ್ಥಾತ್ ಪರಮಾತ್ಮ ಶಕ್ತಿಯನ್ನು ವೇದಾದಿಶಾಸ್ತ್ರಾನುಸಾರಿಯಾದ ಕರ್ಮಾನುಷ್ಠಾನದ ಮೂಲಕ ಬಾಳಿನಲ್ಲಿ ವಿಶೇಷವಾಗಿ ಅಭಿವ್ಯಕ್ತಗೊಳಿಸಿ ಬ್ರಹ್ಮತೇಜೋವಂತರಾಗಿ ಬಾಳುವವರು ಬ್ರಾಹ್ಮಣರು. ಯಾವನು ಬ್ರಹ್ಮಜ್ಞಾನಿಯೋ, ಉತ್ತಮ ಮೇಧಸ್ಸನ್ನು ಹೊಂದಿರುತ್ತಾನೋ, ಸಾತ್ವಿಕನೂ ಸತ್ಯಸಂಧನೂ ಆಗಿರುವನೋ ಅಂಥವನು ಬ್ರಹ್ಮತೇಜಸ್ಸನ್ನು ಪಡೆದು ಬ್ರಾಹ್ಮಣನೆಂದೆನಿಸಿಕೊಳ್ಳುತ್ತಾನೆ.
ಬ್ರಾಹ್ಮಣನಾದವನು ಸಾತ್ವಿಕ ಗುಣಗಳನ್ನು ಹೊಂದಿರುತ್ತಾನೆ ಹಾಗೂ ಸಮಾನಚಿತ್ತತೆಯನ್ನು ಪಡೆದಿರುತ್ತಾನೆ. ಅವನು ಸಾತ್ವಿಕವಾದ ಆಚಾರ, ಸಾತ್ವಿಕವಾದ ವಿಚಾರ, ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡೆ-ನುಡಿಗಳನ್ನು ಹೊಂದಿರುತ್ತಾನೆನ್ನುವುದು ನೀತಿ. ಅವನು ಎಲ್ಲರನ್ನೂ ಚಿತ್ತತೆಯಿಂದ, ಸಮಾನ ದೃಷ್ಟಿಯಿಂದ ನೋಡುತ್ತಾನೆ. ಸಮತಾಭಾವವನ್ನು ಹೊಂದಿರುವ ಬ್ರಾಹ್ಮಣನು ಎಲ್ಲರೊಂದಿಗೂ ಪ್ರೀತಿಯಿಂದ ಬೆರೆತು ಇತರರಿಂದಲೂ ಅಂಥದ್ದೇ ಪ್ರೀತಿಯನ್ನು ಬಯಸುತ್ತಾನೆ. ಮಾತ್ರವಲ್ಲದೆ, ಬ್ರಾಹ್ಮಣನು ಇತರ ಎಲ್ಲಾ ಜೀವ-ಜಂತುಗಳನ್ನು, ಇತರ ಎಲ್ಲಾ ಜಾತಿಗಳನ್ನೂ ಗೌರವಿಸುತ್ತಾನೆ. ಪ್ರತಿಯೊಂದು ಜೀವಜಂತುಗಳಲ್ಲೂ, ವಸ್ತುಗಳಲ್ಲೂ ಪರಮಾತ್ಮನ ಅಸ್ತಿತ್ವವನ್ನು ಕಾಣುತ್ತಾನೆ. ಹೀಗೆ ಬ್ರಾಹ್ಮಣರು ಸಾತ್ವಿಕವಾದ ಗುಣನಡತೆಗಳನ್ನು ಹೊಂದಿರುತ್ತಾರೆ ಎನ್ನುವುದು ಭಗವಂತನ ವಾಚ್ಯ.
ಬ್ರಾಹ್ಮಣನ ಗುಣಧರ್ಮಗಳು ಅವನ ಹುಟ್ಟಿನ ನಂತರ ಯಥೋಚಿತವಾದ ಸಂಸ್ಕಾರಗಳ ಫಲದಿಂದ ಅರಳಿ ಬೆಳಗುತ್ತವೆ . ಹಾಗಾಗಿ ಮೂಲತಃ ಬ್ರಾಹ್ಮಣನಲ್ಲಿ ಆ ಗುಣಗಳು ಹುಟ್ಟಿನಿಂದಲೇ ಬೀಜರೂಪವಾಗಿ ಇರುತ್ತದೆನ್ನುವುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ, ಬ್ರಾಹ್ಮಣನು ಹುಟ್ಟಿನಿಂದಲೇ ಬ್ರಾಹ್ಮಣನಾಗಿದ್ದರೂ ಕೂಡಾ ಗುಣಯೋಗ್ಯತೆಗಳು ಅವನಲ್ಲಿ ಇನ್ನೂ ಅರಳದೆ ಸುಪ್ತವಾಗಿರುತ್ತದೆ. ಮುಂದೆ ಶಾಸ್ತ್ರೋಕ್ತವಾಗಿ, ಅಗ್ನಿಸಾಕ್ಷಿಯಾಗಿ ನಡೆಸುವ ಉಪನಯನಾದಿ ಸಂಸ್ಕಾರಗಳಿಂದ ದ್ವಿಜನಾಗಿ (ಅಂದರೆ ದ್ವಿತೀಯ ಜನ್ಮ ಪಡೆದವನಂತೆ) ರೂಪಿತಗೊಂಡು, ಸಂಧ್ಯಾವಂದನೆ, ಉಪಾಸನೆ, ಸದಾಚಾರ, ಸತ್ಕರ್ಮಗಳ ಫಲದಿಂದ ಬ್ರಹ್ಮತೇಜಸ್ಸನ್ನು ಪಡೆದು, ಬ್ರಾಹ್ಮಣನಾಗಿ ಬೆಳಗುತ್ತಾನೆ, ಬೆಳೆಯುತ್ತಾನೆ.
"ದ್ರಾವಿಡ ಬ್ರಾಹ್ಮಣರು" ಎಂದು ಕರೆಯಲ್ಪಡುವವರು ಈಗಿನ ಗೋಕರ್ಣದಿಂದ ಹಿಡಿದು ಕಾಸರಗೋಡಿನವರೆಗೆ ಚಾಚಿದ ಕರಾವಳಿ ಪ್ರದೇಶದ ಬ್ರಾಹ್ಮಣರು. ಇವರಲ್ಲಿ ಮುಖ್ಯವಾಗಿ ಕಾಣಲ್ಪಡುವ ಒಳಪಂಗಡದವರು ಎಂದರೆ ಹವ್ಯಕರು, ಶಿವಳ್ಳಿ, ಕೋಟ, ಕೋಟೇಶ್ವರ, ಸ್ಥಾನಿಕ ಮುಂತಾದವರು. ಹಿಂದಿನಿಂದಲೂ ಬ್ರಾಹ್ಮಣರ ಒಳಪಂಗಡದಲ್ಲಿ ಶಿವಳ್ಳಿ ಬ್ರಾಹ್ಮಣರ ಪಂಗಡವು ಶ್ರೇಷ್ಠವಾದುದೆಂದು ತಿಳಿಯುತ್ತಿದ್ದರು. ಆದರೆ, ಈ ಬ್ರಾಹ್ಮಣರು ಯಾರು?? ಎಲ್ಲಿಂದ ಬಂದವರು???
(ಮುಂದೆ ಓದಿ)
Very nice to see all the details of our ancestors history and it is very much essential for us to preserve the details of our great mother land and the language we speak.
ReplyDeleteTrue...
Delete