"ವಿಶ್ವಾಮಿತ್ರೋ ಜಮದಗ್ನಿರ್ಭರಧ್ವಾಜೋಥ ಗೌತಮಃ ।
ಅತ್ರಿ ವಸಿಷ್ಟಃ ಕಶ್ಯಪ ಇತ್ಯೇತೇ ಸಪ್ತ ಋಷಯಃ ।।
ಸಪ್ತನಾ೦ ಋಷೀಣಾಮಗಸ್ತ್ಯಾಷ್ಟಮಾನಾ೦ ಯದಪತ್ಯಂ ತದ್ಗೋತ್ರಮಿತ್ಯುಚ್ಯತೇ ।।" - ಅಂದರೆ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ, ಇವರು ಸಪ್ತರ್ಷಿಗಳು. ಇವರ ಮತ್ತು ಎಂಟನೆಯವರಾದ ಅಗಸ್ತ್ಯರ ವಂಶದಲ್ಲಿ ಜನಿಸಿದವನು ಆಯಾ ಗೋತ್ರದವನು ಎಂದೆನಿಸಿಕೊಳ್ಳುತ್ತಾನೆ. ಅಂದರೆ, ಈ ಎಂಟು ಋಷಿಗಳ ಸಂತಾನದವರು ವಿಶ್ವಾಮಿತ್ರ ಗೋತ್ರ, ಜಮದಗ್ನಿ ಗೋತ್ರ, ಎಂದು ಮುಂತಾಗಿ ಆಯಾ ಋಷಿಗಳ ಹೆಸರಿನ ಗೋತ್ರದವರೆಂದು ಹೆಸರು ಪಡೆಯುತ್ತಾರೆ.
ಗೋತ್ರವೆಂದರೆ ವಂಶವೆಂದೂ, ವಂಶದಲ್ಲಿ ಜನಿಸಿದವರೆಂದೂ ಅರ್ಥವಿದೆ. ಪ್ರಧಾನವಾಗಿ ಈ ಎಂಟು ಋಷಿಗಳೇ ಗೋತ್ರ ಪ್ರವರ್ತಕರು. ಆದರೆ, ಈ ವಂಶದಲ್ಲಿ ಹುಟ್ಟಿದ ಕೆಲವು ಋಷಿಗಳು ತಮ್ಮ ತಪ ಸಾಮರ್ಥ್ಯದಿಂದ ಗೋತ್ರಪ್ರವರ್ತಕರಾದರು. ಆದುದರಿಂದ ಕೌಂಡಿನ್ಯ, ಅಶ್ವಲಾಯನ ಮೊದಲಾದವರೂ ಗೋತ್ರ ಪ್ರವರ್ತಕರೇ.
ಯಜ್ಞದಲ್ಲಿ ವರಿಸಲ್ಪಟ್ಟವರು ಪ್ರವರರು. ಇವರು ಆಯಾ ಗೋತ್ರಕಾರರ ಸಂತತಿಯವರೂ ಮಂತ್ರದಷ್ಟಾರರೂ ಆಗಿದ್ದರೆ. ಯಾರನ್ನೂ ವರಣ ಮಾಡಿ ಯಜಮಾನನು ಪ್ರಾರ್ಥನೆ ಸಲ್ಲಿಸುವರೋ ಅವರು ಪ್ರವರರ್ಷಿಗಳು. ಈ ಪ್ರವರರ್ಷಿಗಳು ಗೋತ್ರ ಪ್ರವರ್ತಕ ವಂಶದವರೇ ಆಗಿದ್ದು, ಒಂದು ವಿಶಿಷ್ಟವಾದ ಗೌರವ ಸ್ಥಾನವನ್ನು ಪಡೆದುಕೊಂಡು ಸ್ಮರಣೀಯರಾಗಿದ್ದಾರೆ.
ಪ್ರತಿಯೊಬ್ಬ ಬ್ರಾಹ್ಮಣನಿಗೂ ಗೋತ್ರ-ಪ್ರವರಗಳಿದ್ದೇ ಇರುತ್ತವೆ. ಪ್ರತಿಯೊಬ್ಬ ಬ್ರಾಹ್ಮಣನ ದೇಹದಲ್ಲೂ ಆ ಮಹಾನ್ ಋಷಿಗಳ ಒಂದು ರಕ್ತಕಣವಾದರೂ ಹರಿಯುತ್ತಾ ಇರುತ್ತದೆ. ಒಬ್ಬ ಬ್ರಾಹ್ಮಣನ ಮುಖವನ್ನು ನೋಡಿದಾಗ ಆತನಲ್ಲಿ ಒಂದು ತೇಜಸ್ಸಿನ ಅಂಶ ಎದ್ದು ಕಾಣುತ್ತದೆ. ನಿತ್ಯ ಕರ್ಮಾನುಷ್ಠಾನದಲ್ಲಿ ನಿರತರಾದವರು ಯಾರೋ ಅವರಲ್ಲಿ ಈ ತೇಜಸ್ಸು ಇನ್ನೂ ಅಧಿಕವಾಗಿ ಇರುತ್ತದೆ. ಇದನ್ನೇ "ಬ್ರಹ್ಮವರ್ಚಸ್ಸು" ಎನ್ನುವುದು. ಇಂದು ಬ್ರಾಹ್ಮಣವರ್ಗದಲ್ಲಿ ಸರ್ವೋತ್ತರವಾದ ಮೇಧಾಶಕ್ತಿಯೂ, ಲೋಕೋಪಕಾರ ಬುದ್ಧಿಯೂ, ಶಮದಮಾದಿ ಗುಣಗಳ ಒಂದಂಶವೂ ತೋರುತ್ತಿದ್ದರೆ, ಅದು ನಮ್ಮ ಪ್ರವಿಹೀನ ಋಷಿಗಳಿಂದ ಬಳುವಳಿಯಾಗಿ ಬಂದದ್ದು. ಜಗತ್ತಿನ ಎಲ್ಲಾ ಬಳಗಳಲ್ಲಿಯೂ ಬ್ರಹ್ಮವರ್ಚಸ್ಸಿನ ಬಲವೇ ಶ್ರೇಷ್ಠವಾದ ಬಲ. ಆದುದರಿಂದ, ಇಹಪರ ಬದುಕಿಗೆ ಸಂಬಂಧಿಸಿದ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ವಿಧದ ಪುರುಷಾರ್ಥಗಳನ್ನೂ ಪೂರ್ಣವಾಗಿ ಸಾಧಿಸಲು ಸಾಧ್ಯ.
ಬ್ರಾಹ್ಮಣರಿಗೆ ವೇದಗಳು ಆಧಾರಗ್ರಂಥಗಳು ಹಾಗೂ ಅತ್ಯಂತ ಪವಿತ್ರವಾದವುಗಳು. ವೇದಗಳು ಅಪೌರುಷೇಯ. ಪುರುಷನಿರ್ಮಿತವಲ್ಲ. ಧರ್ಮಶಾಸ್ತ್ರ ಮೊದಲಾದವುಗಳೆಲ್ಲವೂ ವೇದ ಮೂಲಕವಾಗಿ ಬಂದವುಗಳು. ಅವುಗಳನ್ನು ಋಷಿ ಮುನಿಗಳು ನಿರ್ಮಿಸಿದ್ದಾರೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ - ಇವುಗಳು ಚತುರ್ವೇದಗಳು. ಋಗ್ವೇದವನ್ನು ಅಧ್ಯಯನ ಮಾಡುವವರು ಋಗ್ವೇದಿಗಳು, ಹೀಗೆಯೇ ಯಜುರ್ವೇದೀ, ಸಾಮವೇದೀ ಹಾಗೂ ಅಥರ್ವಣವೇದಿಗಳಾಗುತ್ತಾರೆ.
ಪ್ರತಿಯೊಬ್ಬ ಬ್ರಾಹ್ಮಣನೂ ತನ್ನ ವೇದ ಶಾಖೆ, ಸೂತ್ರ, ಗೋತ್ರ, ಪ್ರವರ, ಕುಲದೇವತೆ, ಗುರುಪೀಠ, ತಂದೆ - ತಾಯಿ, ಅಜ್ಜ- ಅಜ್ಜಿ, ಮುತ್ತಜ್ಜ - ಮುತ್ತಜ್ಜಿ, ಇವರ ಹೆಸರುಗಳು, ಮಾತೃವರ್ಗದ ಗೋತ್ರ ಮತ್ತು ಹಿರಿಯರ ಹೆಸರುಗಳು, ಹೆತ್ತವರು ಮೃತರಾಗಿದ್ದಾರೆ ಅವರ ಮರಣದ ತಿಂಗಳು, ಪಕ್ಷ ಮತ್ತು ತಿಥಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಪ್ರತಿಯೊಬ್ಬ ಬ್ರಾಹ್ಮಣನೂ ತನ್ನ ಮನೆಯಲ್ಲಿ ತನ್ನ ಇಷ್ಟದೇವರ ಪಟ , ಕುಲದೇವತೆಯ ಪಟ , ಉಡುವ ಮತ್ತು ಹೊದೆಯುವ ಮಡಿಬಟ್ಟೆ, ಹರಿವಾಣ, ತಂಬಿಗೆ, ಪಂಚಪಾತ್ರೆ, ಉದ್ಧರಣೆ, ಘಂಟೆ, ಆರತಿ, ದೀಪ ಹಚ್ಚುವ ಗಿಣಗಳು, ವಿಭೂತಿ, ಅರಸಿನ, ಕುಂಕುಮ, ರಂಗವಲ್ಲಿ, ಧೂಪದ ಕಟ್ಟೆ , ಬತ್ತಿ, ಕರ್ಪೂರ, ಶ್ರೀಗಂಧ, ಚಂದನ, ಭಗವದ್ಗೀತೆಯ ಪುಸ್ತಕ,ವಿಷ್ಣುಸಹಸ್ರನಾಮದ ಪುಸ್ತಕ, ಆಯಾ ವರ್ಷದ ಪಂಚಾಂಗ , ಧರ್ಭೆ, ಕರಿಯ ಎಳ್ಳು, ಮರದ ಮಣೆ , ಚಿಕ್ಕ ಚಾಪೆಗಳು, ಬಿಡಿ ಜನಿವಾರಗಳು, ಗಂಗಾಜಲವನ್ನು ತುಂಬಿದ ಕಲಶ, ಶಂಖ, ಜಾಗಟೆ, ತಾಳ - ಇವುಗಳು ಮುಖ್ಯವಾಗಿ ಇರಬೇಕು.
ಪ್ರತಿಯೊಬ್ಬ ಬ್ರಾಹ್ಮಣನೂ ಆತ ವೈದಿಕನಾಗಿರಲಿ, ಲೌಕಿಕನಾಗಿರಲಿ ಯಥಾಶಕ್ತಿಯಾಗಿ ವೈದಿಕ ಧರ್ಮವನ್ನು ಪಾಲಿಸಲೇಬೇಕು. ಯಾರ ಅಂತರಂಗದಲ್ಲಿ ಧರ್ಮದ ಬೀಜವಿದೆಯೋ, ನೀರಿಲ್ಲದೆ ಮೊಳಕೆಯಾಗದೆ, ಚಿಗುರದೆ ಇದೆಯೋ, ಅಂಥವರು ತಮ್ಮ ಅಂತರಂಗದಲ್ಲಿರುವ ಧರ್ಮದ ಬೀಜದ ಬೆಳವಣಿಗೆ ಆಗುವುದಕ್ಕಾಗಿ, ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಬರಬೇಕು. ಆಗ ಮಾತ್ರವೇ ಧರ್ಮದ ಚಿಗುರಿನ ಗಿಡವು ಬಾಡದೇ ಬೆಳೆದು ಶಾಶ್ವತವಾದ ಮರವಾಗಲು ಸಾಧ್ಯವಿದೆ,
ಹೀಗೆ ಧಾರ್ಮಿಕವಾಗಿ ಮುಂದಿರುವ, ಸಕಲ ಧಾರ್ಮಿಕ ಆಚರಣೆಗಳನ್ನೂ ಸ್ವಾರ್ಥವಿಲ್ಲದೆ, ತನ್ನಿಂದ ಸಾಧ್ಯವಿರುವಷ್ಟರ ಮಟ್ಟಿನಲ್ಲಿ ನಡೆಸಿಕೊಂಡು ಬರುವ ಬ್ರಾಹ್ಮಣನೂ ಕೊಳಚೆ ನೀರಿನಲ್ಲೂ ಶೋಭಿಸುವ ತಾವರೆಯಂತೆ ಆಕಾಶದಲ್ಲಿ ಮಿನುಗಿ ಎಲ್ಲರನ್ನೂ ಆಕರ್ಷಿಸುವ ತಾರೆಯಂತೆ ಶೋಭಿಸುವುದರಲ್ಲಿ ಸಂದೇಹವೇ ಇಲ್ಲ.
[ಅಧ್ಯಯನ ಗ್ರಂಥ: "ಗ್ರಾಮ ಪದ್ಧತಿ" (ಐತಿಹಾಸಿಕ ಹಿನ್ನಲೆಗಾಗಿ)]